ಮಾಸ್ತಿ ವಿಮರ್ಶೆಯ ಅನನ್ಯತೆ

ಮಾಸ್ತಿ ವಿಮರ್ಶೆಯ ಅನನ್ಯತೆ

ಕನ್ನಡ ವಿಮರ್ಶೆಯ ಇತಿಹಾಸದಲ್ಲಿ ಮಾಸ್ತಿಯವರ ಹೆಸರು ಹಲವು ಮುಖ್ಯ ಕಾರಣಗಳಿಗಾಗಿ ಗಮನಾರ್ಹವೆನಿಸುತ್ತದೆ. ಇವರು ವಿಮರ್ಶೆಯನ್ನು ಬರೆಯಲು ಆರಂಭಿಸಿದ ಕಾಲದಲ್ಲಿ ಕರ್ನಾಟಕವನ್ನೊಳಗೊಂಡ ಭಾರತದಲ್ಲಿ ಮಹತ್ತರವಾದ ಸಾಂಸ್ಕೃತಿಕ ಪಲ್ಲಟಗಳು ತಲೆದೋರುತ್ತಿದ್ದವು. ಭೌತಿಕ ಮತ್ತು ಬೌದ್ಧಿಕ ಭಾರತವು ಹೊಸ ವಿನ್ಯಾಸದಲ್ಲಿ ಮೈತಳೆಯುತ್ತಿತ್ತು. ಈ ಸಂದರ್ಭದಲ್ಲಿ ದೇಶದಾದ್ಯಂತ ಹೊಸ ಚಿಂತನೆಗಳು, ನೂತನ ಸಾಹಿತ್ಯ ಪ್ರಕಾರಗಳು ಆವಿಷ್ಕಾರಗೊಳ್ಳುತ್ತಿದ್ದವು. ಪಾಶ್ಚಾತ್ಯರ ಸಂಪರ್ಕದಲ್ಲಿ ದಾಸ್ಯ ಮತ್ತು ಸ್ವಾಭಿಮಾನ- ಈ ಎರಡು ಪ್ರಜ್ಞೆಗಳು ಏಕ ಕಾಲಕ್ಕೆ ಜಾಗೃತಗೊಳ್ಳತೊಡಗಿದವು. ಆಗ ಪಾಶ್ಚಾತ್ಯ ಸಾಹಿತ್ಯ ಮತ್ತು ಶಿಕ್ಷಣದಿಂದ ರೂಪುಗೊಂಡ ಹಲವು ದೇಶೀ ವಿದ್ವಾಂಸರು ಕನ್ನಡ ಸಾಹಿತ್ಯ ಮತ್ತು ಪರಂಪರೆಯನ್ನು ಪುನರ್ ರಚಿಸಲು ತೊಡಗಿದರು. ಪರಿಣಾಮವಾಗಿ ಆಧುನಿಕ ಪೂರ್ವ ಕನ್ನಡ ಸಾಹಿತ್ಯ ಹೊಸದಾಗಿ ಪುನರ್ ಪ್ರತಿಷ್ಠಾಪನೆಗೆ ತೊಡಗಿತು. ಈ ಕೆಲಸದಲ್ಲಿ ನವೋದಯ ಚಿಂತಕರದು ಗಮನಾರ್ಹವಾದ ಪಾತ್ರವಿದೆ.

ವಸಾಹತು ಪೂರ್ವದಲ್ಲಿ ಅನೇಕ ದೇಶಿ ಸಾಹಿತ್ಯ ಪ್ರಕಾರಗಳು ‘ಸಾಹಿತ್ಯ’ ಎಂಬ ಹಣೆಪಟ್ಟಿಯನ್ನು ಧರಿಸಿರಲಿಲ್ಲ. ಆದರೆ ಅವುಗಳಲ್ಲಿ ಕಾವ್ಯಾತ್ಮಕವಾದ ಗುಣ ಇತ್ತು. ಇಂತಹ ಸಾಹಿತ್ಯ ಪ್ರಕಾರಗಳಾದಂತಹ ವಚನ, ಕೀರ್ತನೆ, ತತ್ವಪದ, ಜಾನಪದ ಸಾಹಿತ್ಯಗಳಿಗೆ ಮೊದಲು ಮಾಸ್ತಿಯವರ ಸಾಲಿನ ವಿಮರ್ಶಕರು ಸಾಹಿತ್ಯಕ ಗೌರವವನ್ನು ತಂದುಕೊಡುತ್ತಾರೆ. ಈ ನಿಟ್ಟಿನಲ್ಲಿ ಮಾಸ್ತಿಯವರು ‘ವೈಷ್ಣವ ದಾಸರ ಕೀರ್ತನೆಗಳು’, ‘ಕನ್ನಡ ನಾಡಿನ ಸಾಂಗತ್ಯಗಳು’ ಮೊದಲಾದ ಲೇಖನಗಳನ್ನು ಕ್ರಮವಾಗಿ ದಾಸರ ಕೀರ್ತನೆಗಳನ್ನು ಮತ್ತು ಜನಪದ ಲಾವಣಿಗಳನ್ನು ಅನುಲಕ್ಷಿಸಿ ಮಾಡುತ್ತಾರೆ. ಇವುಗಳಲ್ಲಿ ಪುರಂದರದಾಸರ, ಕನಕದಾಸರ ಕೀರ್ತನೆಗಳನ್ನು ಸೋದಾಹರಣವಾಗಿ ಚರ್ಚಿಸುತ್ತಾರೆ. ಇಲ್ಲಿ ವಿವರಣಾತ್ಮಕವಾದ ನೆಲೆಯಿದೆ; ರಸನಿಷ್ಠತೆಯ ಪ್ರಜ್ಞೆ ಕ್ರಿಯಾಶೀಲವಾಗಿದೆ.

ಹೀಗೆ ಕೀರ್ತನೆ ಮತ್ತು ಜನಪದ ಲಾವಣಿಗಳನ್ನು ವಿವರಣಾತ್ಮಕವಾಗಿ ಚರ್ಚಿಸುತ್ತಾ ಅದರ ರಸಸ್ಥಾನಗಳನ್ನು ವೈಭವೀಕರಿಸುತ್ತಾ ಸಾಗುವಲ್ಲಿ ಅವುಗಳ ಬಗೆಗೆ ಸಹೃದಯನ ಆಸಕ್ತಿಯನ್ನು ಕೆರಳುವಂತೆ ಮಾಡುತ್ತಾರೆ. ಪ್ರಸ್ತುತ ವಿಮರ್ಶೆಯನ್ನು ಓದಿದ ಸಹೃದಯ ಮೂಲಕೃತಿಗೆ ಹೋಗಬೇಕೆಂಬ ಒತ್ತಾಸೆಯನ್ನು ಅಲ್ಲಿ ಮೂಡಿಸುತ್ತಾರೆ. ಇಂತಹ ಚರ್ಚೆಯ ಮೂಲಕ ಈ ಪದಗಳಿಗಿರುವ ಬಹುಮುಖಿ ಆಯಾಮಗಳನ್ನು ಗುರುತಿಸುತ್ತಾರೆ. ಕೃಷ್ಣಪಾರಮ್ಯತೆ, ಸಾಮಾಜಿಕ ವಿಡಂಬನೆ, ಆತ್ಮಪರಮಾತ್ಮನ ನಡುವಿನ ಬಾಂಧವ್ಯ, ನೂತನ ‘ಹೊಲೆಯ’ ಮೀಮಾಂಸೆ- ಹೀಗೆ ಕೀರ್ತನೆಗಳಿರುವ ಬಹುಮುಖಿ ನೆಲೆಗಳನ್ನು ಪರಿಶೀಲಿಸುತ್ತಾ, ಇವು ವೈರಾಗ್ಯ ಪರವಾದವು ಎಂಬ ಸಾಮಾನ್ಯ ನಂಬಿಕೆಯನ್ನು ಅಳಿಸಿಹಾಕುತ್ತಾರೆ. ಈ ಮೂಲಕವಾಗಿ ಸರಳ ರಚನೆಗಳೆನಿಸಿರುವ ಇವು ಜನಮುಖಿಯಾದ ಚಲನೆ ಮತ್ತು ಅದರ ಆಶಯಗಳನ್ನು ಬಿಂಬಿಸುತ್ತವೆ ಎಂಬ ಅಂಶವನ್ನು ಗುರುತಿಸುತ್ತಾರೆ.

ಕೀರ್ತನೆಗಳ ಬಗೆಗಿರುವ ಸಾಂಸ್ಕೃತಿಕ ಮೂಢನಂಬಿಕೆಗಳನ್ನು ನಿರಾಕರಿಸುತ್ತಾ ಅವುಗಳ ಬಹುಮುಖತ್ವವನ್ನು ವಿವರಣಾತ್ಮಕವಾಗಿ ಪರಿಶೀಲಿಸುತ್ತಾ ರಸನಿಷ್ಠವಾದ ಪ್ರಜ್ಞೆಯಿಂದ ಅವುಗಳ ಕಾವ್ಯಾತ್ಮಕವಾದ ಗುಣವನ್ನು ಗ್ರಹಿಸುತ್ತಾ ಅಂತಿಮವಾಗಿ ಅವುಗಳಿಗೆ ಕಾವ್ಯ ಗೌರವವನ್ನು ತಂದುಕೊಡುತ್ತಾರೆ. ಈ ಮಾತುಗಳು ಜನಪದ ಸಾಹಿತ್ಯಕ್ಕೂ ಅನ್ವಯಿಸುವಂತೆ ‘ಕನ್ನಡ ನಾಡಿನ ಸಾಂಗತ್ಯಗಳು’ ಎಂಬ ವಿಮರ್ಶಾ ಲೇಖನದಲ್ಲಿ ಮಾತನಾಡುತ್ತಾರೆ.

ಹೀಗೆ ವಸಾಹತು ಪೂರ್ವ ಸಾಹಿತ್ಯವನ್ನು ರಸನಿಷ್ಟವಾಗಿ ಗ್ರಹಿಸುತ್ತಾ ಅದರ ಬಗೆಗೆ ಅಪೂರ್ವವಾದ ಆದರಾಭಿಮಾನಗಳನ್ನು ಪ್ರಕಟಿಸುತ್ತಾರೆ. ಅದಕ್ಕೆ ಕಾರಣ ತಾವು ನೆಲೆಸಿರುವ ದೇಶದ ಸಾಂಸ್ಕೃತಿಕ ಸನ್ನಿವೇಶವಾಗಿದೆ. ಇಂತಹ ಚಾರಿತ್ರಿಕ ಘಟ್ಟದಲ್ಲಿ ಪೂರ್ವ ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ಅದರ ವೈಭವೀಕರಣವು ತತ್ಕಾಲೀನ ಸಂದರ್ಭದ ಜರೂರುಗಳಲ್ಲಿ ಒಂದಾಗುತ್ತದೆ. ಆದ್ದರಿಂದ ವಸಾಹತುಶಾಹಿ ನಿರ್ಮಿಸಿದ ಆತಂಕಗಳನ್ನು ಎದುರಿಸಲು ತಮ್ಮ ಪೂರ್ವಸ್ಮೃತಿಗಳನ್ನು ಬಂಡವಾಳವಾಗಿಸಿಕೊಳ್ಳುತ್ತಾರೆ. ಆಗ ಸಹಜವಾಗಿಯೇ ಹಿಂದಿನ ಸಾಹಿತ್ಯ ಕೃತಿಗಳು ಅಮೂಲ್ಯವೆನಿಸುತ್ತವೆ; ಅಂತಹ ಕೃತಿಗಳನ್ನು ಕುರಿತು ಮಾತನಾಡುವಾಗ ವೈಭವೀಕರಣವು ಸಹಜವಾಗುತ್ತದೆ.

ಸಂಸ್ಕೃತಿಯ ನಿರ್ಮಿತಿಯಲ್ಲಿ ಸಾಹಿತ್ಯದ ಪಾತ್ರ ಅಗಣಿತವಾದುದು ಎಂದು ನಂಬಿದ ಮಾಸ್ತಿಯವರು ಕನ್ನಡದ ಪೂರ್ವ ಕಾವ್ಯವು ಜನ ಬದುಕಬೇಕೆಂದು ಬರೆದ ರಚನೆಗಳಾಗಿವೆ ಎಂಬ ನಿಲುವನ್ನು ವ್ಯಕ್ತಪಡಿಸುತ್ತಾರೆ. ಆದ್ದರಿಂದ ಸಮಕಾಲೀನ ಸಂದರ್ಭದ ಸಂಸ್ಕೃತಿಯನ್ನು ಸಹ ಆರೋಗ್ಯಕರವಾಗಿ ಕಟ್ಟುವ ಸಲುವಾಗಿ ಪೂರ್ವಕಾವ್ಯಗಳ ಸ್ಮರಣೆ ಅಗತ್ಯ ಎಂದು ಭಾವಿಸುತ್ತಾರೆ. ಆದರೆ ಬೌದ್ಧಿಕವಾಗಿ ವಿವಿಧ ಅಂತಸ್ತುಗಳ ಜನರಿರುವುದರಿಂದ ವಿವಿಧ ಹಂತಗಳ ಕಾವ್ಯಗಳ ಸಂವಹನ ಕ್ರಿಯೆಯು ವಿವಿಧ ಹಂತಗಳಲ್ಲಿ ಆಗಬೇಕು ಎಂದು ಭಾವಿಸುತ್ತಾರೆ. ಆದ್ದರಿಂದ ವಿವಿಧ ಅಂತಸ್ತಿನ ಸಾಹಿತ್ಯಕ್ಕೆ ಅನುಗುಣವಾದ ವಿಮರ್ಶಾ ಅವಸ್ಥೆಗಳೂ ವಿಮರ್ಶಕರೂ ಅಗತ್ಯ ಎಂಬುದನ್ನು ನಿರ್ದೇಶಿಸುತ್ತಾರೆ. ಇಂತಹ ಕಾರ್ಯದಲ್ಲಿ ತೊಡಗುವ ವಿಮರ್ಶಕ ಮೂಲಭೂತವಾಗಿ ಕೃತಿಯ ಬಗೆಗೆ ಸಹಾನುಭೂತಿಯನ್ನು ಇಟ್ಟುಕೊಂಡಿರಬೇಕು. ಕವಿಗೆ ಲಭಿಸಿದ ಸಂಸ್ಕಾರ ವಿಮರ್ಶಕನಿಗೂ ಲಭಿಸರಬೇಕು ಅಥವಾ ಲಭ್ಯವಾಗಿಸಿಕೊಂಡಿರಬೇಕು. ಆದ್ದರಿಂದ ವಿವಿಧ ಹಂತಗಳ ಸಾಹಿತ್ಯವನ್ನು ವಿವಿಧ ಹಂತಗಳ ಜನರಿಗೆ ಸಂವಹಿಸುವ ಕ್ರಿಯೆಯಲ್ಲಿ ವಿಮರ್ಶಕರ ಪಾತ್ರ ಮುಖ್ಯವಾದುದಾಗಿದೆ. ಎಲ್ಲಾ ಕೃತಿಗಳನ್ನು ಎಲ್ಲಾ ಸಹೃದಯರು ಸೂಕ್ಷ್ಮವಾಗಿ ಗಮನಿಸುವುದು ಸಾಧ್ಯವಲ್ಲದ್ದರಿಂದ ವಿಮರ್ಶಕ ಆ ಸಾಹಿತ್ಯ ಕೃತಿಯ ಅಂತರಂಗವನ್ನು ಪ್ರವೇಶಿಸಿ, ಅದನ್ನು ರಸನಿಷ್ಪವಾಗಿ ವಿವರಣಾತ್ಮಕವಾಗಿ ಸಹೃದಯರ ಮುಂದೆ ತೆರೆದು ಇಡಬೇಕು. ಇಂತಹ ವಿಮರ್ಶೆಯ ಓದಿನಿಂದ ಸಹೃದಯ ಮೂಲ ಓದಿಗೆ ಹೋಗಬೇಕು ಎಂದು ಆಶಿಸುತ್ತಾರೆ. ಇದಕ್ಕೆ ತಮ್ಮ ಲೇಖನಗಳು ಸಹ ಮಾದರಿಯಾಗಿವೆ ಎಂದು ಅಪ್ರಜ್ಞೆಪೂರ್ವಕವಾಗಿ ಭಾವಿಸುತ್ತಾರೆ.

ಹೀಗೆ ಸಂಸ್ಕೃತಿಯನ್ನು ಕಟ್ಟುವ ಹೊಣೆಗಾರಿಕೆ ಸಾಹಿತ್ಯಕ್ಕೆ ಇರುವಂತೆ ವಿಮರ್ಶೆಗೂ ಇದೆ. ಇಂತಹ ವಿಮರ್ಶೆ ಕವಿ ಮತ್ತು ಸಹೃದಯರ ನಡುವೆ ಸೇತುವೆಯೂ ಆಗಬೇಕು ಎಂಬ ನಿಲುವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಇಂತಹ ಕೃತಿ ಪರಿಶೀಲನಾ ಕಾರ್ಯದಲ್ಲಿ ವಿಮರ್ಶಕನು ಕವಿಯ ಬಗೆಗೆ ಪೂರ್ವಾಗ್ರಹ ಪೀಡಿತನಾಗಿರದೆ ಕಾವ್ಯಗೌರವವನ್ನು ಉಳ್ಳವನಾಗಿರಬೇಕು. ಈ ಮನಸ್ಥಿತಿಯಲ್ಲಿ ಸಾಗುವ ವಿಮರ್ಶಕ ಕವಿಗೂ ಸಮನಾಗುತ್ತಾನೆ. ಅಲ್ಲದೆ ಸಾಹಿತ್ಯ ಜಗತ್ತಿನಲ್ಲಿ ಕಾಣತೊಡಗಿದ್ದ ಕವಿ ಮತ್ತು ವಿಮರ್ಶಕರನ್ನು ಕುರಿತ ಶ್ರೇಣೀಕರಣವನ್ನು ಸಹ ಪ್ರತಿರೋಧಿಸುತ್ತಾರೆ. ಈ ಮೂಲಕ ವಿಮರ್ಶೆ ಮತ್ತು ವಿಮರ್ಶಕನಿಗೂ ಸಾಹಿತ್ಯ ಜಗತ್ತಿನಲ್ಲಿ ಮೊದಲ ಮಣೆಯನ್ನೇ ಹಾಕುವ ಪರಿಪಾಠವನ್ನು ಬೆಳೆಸಲು ಪ್ರಯತ್ನಿಸುತ್ತಾರೆ.

ಇಂತಹ ವಿಮರ್ಶೆಗಳಿಂದ ಕವಿಗಿರುವ ಲಾಭ ಮತ್ತು ಅದರ ನಂತರದ ಕೃತಿಗಳು ವಿಮರ್ಶೆಗೆ ಋಣಿಯಾಗಬೇಕಾದುದರಿಂದ ಕವಿಯು ವಿಮರ್ಶಕನ ಬಗೆಗೆ ಸಮಾನ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ಆಶಿಸುತ್ತಾರೆ.

ಹೀಗೆ ಸಮಕಾಲೀನ ಮತ್ತು ಪೂರ್ವ ಸಾಹಿತ್ಯ ಕೃತಿಗಳನ್ನು ಸಹೃದಯದ ಮುಂದೆ ಪುನರ್ ಪ್ರತಿಸ್ಥಾಪಿಸುವ ಕ್ರಿಯೆಯ ವಿಮರ್ಶೆಯು ಈ ಹಳೆಯ ಮತ್ತು ಹೊಸ ಕೃತಿಕಾರರನ್ನು ಉತ್ತೇಜನಗೊಳಿಸಬೇಕೆಂದು ಇಚ್ಫಿಸುತ್ತಾರೆ. ಸರಳ ಭಾಷಾ ಶೈಲಿಯಲ್ಲಿ ಕಾಣಿಸುತ್ತಿದ್ದ ಸಂಖ್ಯೆಯ ಕೃತಿಗಳು ಕನ್ನಡ ಸಂಸ್ಕೃತಿಯ ಕಟ್ಟುವಿಕೆಯ ಕ್ರಿಯೆಯಲ್ಲಿ ಗಮನಾರ್ಹವಾದ ಪಾತ್ರವನ್ನು ವಹಿಸಬೇಕೆಂಬ ಒತ್ತಾಸೆ ತಮ್ಮಲ್ಲಿ ಮೂಡಿದ್ದರಿಂದ ನೂತನ ಬರಹಗಾರರಿಗೆ ತಮ್ಮ ವಿಮರ್ಶೆಗಳ ಮೂಲಕ ಗಮನಾರ್ಹವಾದ ಉತ್ತೇಜನವನ್ನು ನೀಡುತ್ತಾ ಅವರು ಸಂಸ್ಕೃತಿ ಕಟ್ಟಡದ ನಿರ್ಮಾಣದಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕೆಂದು ಅಪೇಕ್ಷಿಸುತ್ತಾರೆ. ಆದ್ದರಿಂದಲೇ ಮಾಸ್ತಿಯವರ ಒಟ್ಟಾರೆ ವಿಮರ್ಶಾ ಸಾಹಿತ್ಯದಲ್ಲಿ ಉತ್ತೇಜನಕಾರಿ ನೆಲೆಗಳು ಸ್ಪಷ್ಟವಾಗಿ ಗೋಚರವಾಗುವುದು ಮತ್ತು ಪೂರ್ವ ಸಾಹಿತ್ಯ ಕೃತಿಗಳು ಸಮಕಾಲೀನರ ಮನಸ್ಸಿಗೆ ಹೋಗಬೇಕು ಎಂಬ ಇಚ್ಫೆಯಿಂದ ಅವುಗಳನ್ನು ಕುರಿತ ವೈಭವೀಕರಣವು ಸಹ ವಿವಿಧ ನೆಲೆಗಳಲ್ಲಿ ಗೋಚರಿಸುತ್ತಾ ಹೋಗುವುದು.

ಹೀಗೆ ಸಾಹಿತ್ಯದಂತೆ ವಿಮರ್ಶೆಯೂ ಸಂಸ್ಕೃತಿಯ ನಿರ್ಮಾಣದಲ್ಲಿ ಮಹತ್ತರವಾದ ಪಾತ್ರವಹಿಸಬೇಕು ಎಂಬ ಇವರ ಅಭಿಪ್ಸೆ ತಮ್ಮ ಸಮಕಾಲೀನರನ್ನು ಕುರಿತ ಹಾಗೂ ಪೂರ್ವ ಸಾಹಿತ್ಯವನ್ನು ಕುರಿತ ತಮ್ಮ ಬರವಣಿಗೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ನಡುವೆ ಕೃತಿಕಾರರ ಮಿತಿಗಳನ್ನು, ದೋಷಗಳನ್ನು ಗುರುತಿಸುತ್ತಾ ಅವುಗಳು ಪುನರಾವರ್ತನೆಯಾಗದಂತೆ ಮೃದುವಾದ ಮಾತುಗಳಲ್ಲಿ ವಿಮರ್ಶೆಯು ನಿರ್ದೇಶನ ಮಾಡಬೇಕೆಂದು ಆಶಿಸುತ್ತಾರೆ. ಈ ನಿಟ್ಟಿನಲ್ಲಿ ಇವರ ‘ಸತೀ ಹಿತೈಷಿಣೀ ಗ್ರಂಥಮಾಲೆ’ ಎಂಬ ವಿಮರ್ಶಾ ಲೇಖನವನ್ನು ಗಮನಿಸಬೇಕು.

ಸಾಹಿತ್ಯದಲ್ಲಿ ವಿವಿಧ ಅವಸ್ಥೆಗಳಿರುವಂತೆ ವಿಮರ್ಶೆಯಲ್ಲಿಯೂ ಇರಬೇಕು. ಇದರ ನಿರ್ಮಿತಿಯಲ್ಲಿ ಬುದ್ಧಿ-ಭಾವಗಳೆರಡೂ ಔಚಿತ್ಯಪೂರ್ಣವಾಗಿ ಕಾರ್ಯೋನ್ಮುಖವಾಗಬೇಕು ಎಂಬ ಇನ್ನೂ ಹಲವು ನಿರ್ದೇಶನಗಳನ್ನು ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ತಮ್ಮ ವಿಮರ್ಶಾ ಲೇಖನಗಳು ಲಕ್ಷ್ಯವೂ ಲಕ್ಷಣವೂ ಆಗಿ ಅಂತಿಮವಾಗಿ ರೂಪಕವೇ ಆಗಿಬಿಡುತ್ತವೆ.

ಹೀಗೆ ಕನ್ನಡ ವಿಮರ್ಶೆ ಕಣ್ತೆರೆಯುತ್ತಿದ್ದ ಕಾಲ ಘಟ್ಟದಲ್ಲಿ ನಿಂತು ಈ ಬಗೆಯಾಗಿ ಮಾತನಾಡುವ ಮಾಸ್ತಿಯವರ ಮಾತುಗಳಲ್ಲಿ ಹಲವು ಮಿತಿಗಳು ಇವೆ. ಉದಾಹರಣೆಗೆ ಕವಿತ್ವ ಎಂಬುದು ಜನ್ಮತಃ ಬಂದಿರುತ್ತದೆ ಎಂಬುದಾಗಿ ಅವರು ತಳೆದ ನಿಲುವು. ಆದರೂ ಈ ನಡುವೆ ಕನ್ನಡ ವಿಮರ್ಶಾ ಪ್ರಸ್ಥಾನದಲ್ಲಿ ಮಾಸ್ತಿಯವರ ಕೃತಿಗಳು ಗಮನಾರ್ಹವಾದ ನಿರ್ದೇಶನವನ್ನು ನೀಡುತ್ತಿರುವುದರಿಂದ, ಈ ನಿಟ್ಟಿನಲ್ಲಿ ನವೋದಯ ವಿಮರ್ಶೆಯು ಬೆಳೆದಿರುವುದರಿಂದ ಕನ್ನಡ ವಿಮರ್ಶೆಯಲ್ಲಿ ಮಾಸ್ತಿಯವರಿಗಿರಬೇಕಾದ ಚಾರಿತ್ರಿಕ ಮಹತ್ವವನ್ನು ನಾವು ದೃಢಪಡಿಸಿಕೊಳ್ಳ ಬೇಕಾಗಿದೆ.
*****
೨-೧೨-೨೦೦೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನದು
Next post ಹಂಪೆ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys